ಲಾಂಗ್ ರೈಡ್‌ಗೂ ಮುನ್ನ ಪ್ರತಿ ರೈಡರ್ ಪರಿಶೀಲಿಸಬೇಕಾದ ಅಂಶಗಳು - ಟೈರ್ ಮತ್ತು ಇಂಧನದ ಆಚೆಗೆ
ತೆರೆದ ರಸ್ತೆಗೆ ಇಳಿಯುವ ಮುನ್ನ ಎಲ್ಲಾ ಅಗತ್ಯ ಅಂಶಗಳನ್ನು ಪರಿಶೀಲಿಸಿ, ಸುರಕ್ಷತೆ ಮತ್ತು ಸರಾಗ ಕಾರ್ಯಕ್ಷಮತೆಗೆ ಆದ್ಯತೆ ನೀಡಿ ಮತ್ತು ನಿಮ್ಮ ಮೋಟಾರ್‌ಸೈಕಲ್ ಪ್ರವಾಸಕ್ಕೆ ಸಂಪೂರ್ಣ ಸಿದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ಹೆಚ್ಚಿನ ರೈಡರ್‌ಗಳು ಲಾಂಗ್ ರೈಡ್‌ಗೆ ಒಂದೇ ರೀತಿ ಸಿದ್ಧರಾಗುತ್ತಾರೆ: ಟ್ಯಾಂಕ್ ತುಂಬಿಸುತ್ತಾರೆ, ಟೈರ್‌ಗಳನ್ನು ಒದ್ದು ನೋಡುತ್ತಾರೆ, ವೈಸರ್ ಒರೆಸುತ್ತಾರೆ, ಸಾಹಸಕ್ಕೆ ಸಿದ್ಧ ಎಂದು ಭಾವಿಸುತ್ತಾರೆ. 200 ಕಿಲೋಮೀಟರ್ ಆದ ನಂತರ ಯಾವುದೋ ಸಣ್ಣ ವಿಷಯ “ನನ್ನನ್ನು ನೀನು ಪರಿಶೀಲಿಸಬೇಕಿತ್ತು” ಎಂದು ಪಿಸುಗುಟ್ಟುವವರೆಗೂ ಇದು ಸರಿಯಾಗಿಯೇ ನಡೆಯುತ್ತದೆ. ಲಾಂಗ್ ರೈಡ್‌ಗಳು ಅಪರೂಪಕ್ಕೆ ನಾಟಕೀಯವಾಗಿ ವಿಫಲವಾಗುತ್ತವೆ; ಅವು ಮೌನವಾಗಿ ಹಾಳಾಗುತ್ತವೆ. ಇಲ್ಲಿ ಸಡಿಲವಾದ ಬೋಲ್ಟ್, ಅಲ್ಲಿ ಕುಂದುತ್ತಿರುವ ಬ್ರೇಕ್, ಅಥವಾ ಮಧ್ಯಾಹ್ನದ ಊಟದ ವೇಳೆಗೆ ಸಹಕರಿಸಲು ನಿರಾಕರಿಸುವ ಮರಗಟ್ಟಿದ ಮಣಿಕಟ್ಟು. ಸರಾಗ ಪ್ರಯಾಣ ಮತ್ತು ಒತ್ತಡದ ಪ್ರಯಾಣದ ನಡುವಿನ ವ್ಯತ್ಯಾಸ ಇರುವುದು, ಆಕರ್ಷಕವಲ್ಲದ ಕಾರಣ ರೈಡರ್‌ಗಳು ಹೆಚ್ಚಾಗಿ ಕಡೆಗಣಿಸುವ ಸಣ್ಣಪುಟ್ಟ ವಿವರಗಳಲ್ಲಿ.
ಚೈನ್ ಸ್ಲ್ಯಾಕ್: ಮೌನವಾಗಿ ಮೂಡ್ ಬದಲಿಸುವ ಅಂಶ
ಚೈನ್‌ಗಳು ಕಾಲಕ್ರಮೇಣ ಹಿಗ್ಗುತ್ತವೆ. ಇದು ದೋಷವಲ್ಲ; ಇದು ಭೌತಶಾಸ್ತ್ರ. ಲಾಂಗ್ ರೈಡ್‌ಗೂ ಮುನ್ನ ತಯಾರಕರ ನಿರ್ದಿಷ್ಟತೆಗಳಿಗೆ ಅನುಗುಣವಾಗಿ ಸ್ಲ್ಯಾಕ್ ಪರಿಶೀಲಿಸಿ, ಲೂಬ್ರಿಕೇಶನ್ ಇದೆಯೇ ಮತ್ತು ಅದು ಸ್ವಚ್ಛವಾಗಿದೆಯೇ ಎಂದು ನೋಡಿ, ಅಸಮಾನ ಟೆನ್ಷನ್ ಇರುವ ಜಾಗಗಳನ್ನು ಗಮನಿಸಿ. ಅತಿಯಾಗಿ ಬಿಗಿಯಾದ ಚೈನ್ ಬೇರಿಂಗ್‌ಗಳನ್ನು ಸವೆಸುತ್ತದೆ; ಸಡಿಲವಾದ ಚೈನ್ ಹೊಡೆದುಕೊಳ್ಳುತ್ತದೆ, ಕುಲುಕುತ್ತದೆ ಮತ್ತು ಥ್ರಾಟಲ್‌ನ ಸರಾಗತೆಯನ್ನು ಹಾಳುಮಾಡುತ್ತದೆ, ವಿಶೇಷವಾಗಿ ಬೈಕ್‌ಗೆ ಲಗೇಜ್ ತುಂಬಿದಾಗ. ಕಡಿಮೆ ವೇಗದಲ್ಲಿ ನಿಮ್ಮ ಮೋಟಾರ್‌ಸೈಕಲ್ ಜರ್ಕ್ ಹೊಡೆಯುತ್ತಿದ್ದರೆ, ಚೈನ್ ನಿರ್ಲಕ್ಷ್ಯದ ಸೂಚನೆ ನೀಡುತ್ತಿದೆ ಎಂದೇ ಅರ್ಥ.
ಬ್ರೇಕ್‌ಗಳು: ದಪ್ಪಕ್ಕಿಂತ ಅನುಭವವೇ ಮುಖ್ಯ
ಹೆಚ್ಚಿನ ರೈಡರ್‌ಗಳು ಬ್ರೇಕ್ ಪ್ಯಾಡ್‌ಗಳನ್ನು ಒಮ್ಮೆ ನೋಡಿ ಮುಂದೆ ಹೋಗುತ್ತಾರೆ, ಆದರೆ ಅದು ಅರ್ಧ ಕಥೆಯನ್ನಷ್ಟೇ ಹೇಳುತ್ತದೆ. ಅದಕ್ಕಿಂತ ಮುಖ್ಯವಾದುದು ಬ್ರೇಕ್‌ನ ಅನುಭವ. ಸ್ಪಂಜಿನಂತೆ ಮೆತ್ತಗಿರುವ ಲಿವರ್‌ಗಳು ಸಿಸ್ಟಮ್‌ನಲ್ಲಿ ಗಾಳಿ ಅಥವಾ ತೇವಾಂಶ ಇರುವುದನ್ನು ಸೂಚಿಸುತ್ತವೆ. ಬ್ರೇಕಿಂಗ್ ಹಂತಹಂತವಾಗಿ ಹೆಚ್ಚಾಗಬೇಕು, ಒಮ್ಮೆಲೇ ಅಚ್ಚರಿ ಮೂಡಿಸಬಾರದು. ಬಿಸಿಯಾದಾಗ ಬ್ರೇಕ್ ಹೇಗೆ ವರ್ತಿಸುತ್ತದೆ ಎಂದು ತಿಳಿಯಲು ಸ್ವಲ್ಪ ದೂರದ ರೈಡ್ ನಂತರ ಬ್ರೇಕಿಂಗ್ ಪರೀಕ್ಷಿಸುವುದೂ ಮುಖ್ಯ. ಇಳಿಜಾರುಗಳಲ್ಲಿ ಅಥವಾ ಹೆದ್ದಾರಿಗಳಲ್ಲಿ ಬ್ರೇಕ್ ಫೇಡ್ ಆಗುವುದು ನಾಟಕೀಯವಲ್ಲ; ಆದರೆ ಅದು ತುಂಬಾ ಆತಂಕ ಹುಟ್ಟಿಸುತ್ತದೆ. ಆರಂಭದಲ್ಲೇ ಬ್ರೇಕ್‌ಗಳು ವಿಶ್ವಾಸ ಮೂಡಿಸದಿದ್ದರೆ, ನಂತರ ಅವು ಸುಧಾರಿಸುವುದಿಲ್ಲ.
ಲೈಟಿಂಗ್: ಕಾಣುವುದು ಎರಡೂ ಕಡೆಯ ಒಪ್ಪಂದ
ರಸ್ತೆಯನ್ನು ನೋಡುವುದು ಸಮೀಕರಣದ ಒಂದು ಭಾಗ ಮಾತ್ರ; ಇತರರಿಗೆ ನೀವು ಕಾಣಿಸುವುದೂ ಅಷ್ಟೇ ಮುಖ್ಯ. ಹೆಡ್‌ಲೈಟ್ ಅಲೈನ್‌ಮೆಂಟ್ ಪರಿಶೀಲಿಸಿ, ವಿಶೇಷವಾಗಿ ಲಗೇಜ್ ಇದ್ದಾಗ; ಜೊತೆಗೆ ಬ್ರೇಕ್ ಲೈಟ್‌ನ ಪ್ರತಿಕ್ರಿಯೆ ಮತ್ತು ಇಂಡಿಕೇಟರ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ನೋಡಿ. ಹೆಚ್ಚುವರಿ ಲೈಟ್‌ಗಳನ್ನು ಭದ್ರವಾಗಿ ಅಳವಡಿಸಿರಬೇಕು. ಕುಸಿದ ಸಸ್ಪೆನ್ಶನ್ ಹೆಡ್‌ಲೈಟ್ ಅನ್ನು ಮೇಲಕ್ಕೆ ಓರೆಯಾಗಿಸಿ, ಇತರರ ಕಣ್ಣಿಗೆ ಬೆಳಕು ಹೊಡೆಯುವಂತೆ ಮಾಡಿ ನಿಮ್ಮ ಸ್ವಂತ ಗೋಚರತೆಯನ್ನೂ ಕಡಿಮೆ ಮಾಡಬಹುದು. ಲೈಟ್‌ಗಳ ಸ್ಥಾನ ನಿರ್ಣಾಯಕ, ಮೂಲಭೂತ ರಸ್ತೆ ಸೌಜನ್ಯವೂ ಅಷ್ಟೇ.
ಸಸ್ಪೆನ್ಶನ್ ಮತ್ತು ಲೋಡ್ ಬ್ಯಾಲೆನ್ಸ್: ಮರೆತುಹೋದ ಸಮೀಕರಣ
ಪ್ರತಿ ಮೋಟಾರ್‌ಸೈಕಲ್ ಅನ್ನು ನಿರ್ದಿಷ್ಟ ತೂಕ ಹಂಚಿಕೆಯ ಆಧಾರದಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ, ಮತ್ತು ಲಗೇಜ್ ಆ ಸಮತೋಲನವನ್ನು ಗಣನೀಯವಾಗಿ ಬದಲಿಸುತ್ತದೆ. ಹೆಚ್ಚುವರಿ ತೂಕ ಇದ್ದರೆ ಪ್ರೀಲೋಡ್ ಹೊಂದಿಸಿ, ಸೈಡ್ ಲಗೇಜ್ ಸಮಾನವಾಗಿ ಹಂಚಿಕೆಯಾಗಿದೆಯೇ ಎಂದು ಖಚಿತಪಡಿಸಿ, ಮತ್ತು ಪಟ್ಟಿಗಳನ್ನು ಎಕ್ಸಾಸ್ಟ್‌ಗಳು ಹಾಗೂ ಚಲಿಸುವ ಭಾಗಗಳಿಂದ ದೂರ ಭದ್ರಪಡಿಸಿ. ಹಿಂಭಾಗ ಭಾರವಾದ ಮೋಟಾರ್‌ಸೈಕಲ್ ಮಂದವಾಗಿ ಅನಿಸುತ್ತದೆ, ಮತ್ತು ಕಳಪೆ ಸಮತೋಲನ ವೇಗದಲ್ಲಿ ಅಸ್ಥಿರತೆಗೆ ಕಾರಣವಾಗಬಹುದು. ಹ್ಯಾಂಡ್ಲಿಂಗ್ ಸರಿಯಿಲ್ಲ ಎನಿಸಿದರೆ, ಸಮಸ್ಯೆ ಹೆಚ್ಚಾಗಿ ಲೋಡ್‌ನದ್ದು, ರಸ್ತೆಯದ್ದಲ್ಲ.
ಕಂಟ್ರೋಲ್‌ಗಳು ಮತ್ತು ಎರ್ಗೊನಾಮಿಕ್ಸ್: ಆರಾಮವೇ ನಿಯಂತ್ರಣ
ಕೇಬಲ್‌ಗಳು, ಲಿವರ್‌ಗಳು ಮತ್ತು ಎರ್ಗೊನಾಮಿಕ್ಸ್ ರೈಡರ್‌ನ ಆರಾಮವನ್ನು ನಿರ್ಧರಿಸುತ್ತವೆ. ಥ್ರಾಟಲ್ ಸರಾಗವಾಗಿ ಮರಳುತ್ತದೆಯೇ, ಕೇಬಲ್‌ಗಳಲ್ಲಿ ಹರಿದ ಲಕ್ಷಣಗಳಿಲ್ಲವೇ, ಕ್ಲಚ್ ಎಂಗೇಜ್‌ಮೆಂಟ್ ಸ್ಥಿರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಲಿವರ್‌ಗಳು ನಿಮ್ಮ ಕೈ ಗಾತ್ರಕ್ಕೆ ಹೊಂದುವಂತಿರಬೇಕು. ಅದೇ ಸಮಯದಲ್ಲಿ ನಿಮ್ಮ ಕುಳಿತುಕೊಳ್ಳುವ ಭಂಗಿಯನ್ನೂ ಪರಿಶೀಲಿಸಿ. ಮಣಿಕಟ್ಟುಗಳು ಸಹಜ ಸ್ಥಿತಿಯಲ್ಲಿರಲಿ, ಭುಜಗಳು ಸಡಿಲವಾಗಿರಲಿ, ಮೊಣಕಾಲುಗಳು ಆರಾಮವಾಗಿ ಇರಿಸಲ್ಪಟ್ಟಿರಲಿ. ಸಣ್ಣ ಅಸೌಕರ್ಯಗಳು ಗಂಟೆಗಳು ಕಳೆದಂತೆ ದೊಡ್ಡದಾಗುತ್ತವೆ. ನೋವು ಗಮನ ಭಂಗಗೊಳಿಸುತ್ತದೆ, ಗಮನ ಭಂಗ ಸುರಕ್ಷತೆಗೆ ಧಕ್ಕೆ ತರುತ್ತದೆ. ಸರಿಯಾಗಿ ಹೊಂದಿಸಿದ ರೈಡಿಂಗ್ ಭಂಗಿ ಆರಾಮ ಮತ್ತು ಆತ್ಮವಿಶ್ವಾಸ ಎರಡನ್ನೂ ಹೆಚ್ಚಿಸುತ್ತದೆ.
ಅಂತಿಮ ಪರಿಶೀಲನೆಗಳು ಮತ್ತು ರೈಡ್ ಜಾಗೃತಿ
ಎಲೆಕ್ಟ್ರಿಕಲ್ ಸಿದ್ಧತೆ ಮತ್ತು ದಾಖಲೆಗಳೂ ಅಷ್ಟೇ ಮುಖ್ಯ. ಚಾರ್ಜಿಂಗ್ ಪೋರ್ಟ್‌ಗಳನ್ನು ಪರೀಕ್ಷಿಸಿ, ಕೇಬಲ್‌ಗಳನ್ನು ಭದ್ರಪಡಿಸಿ, ಬ್ಯಾಕಪ್ ಪವರ್ ಜೊತೆಗಿರಿಸಿಕೊಳ್ಳಿ. ವಿಮೆ, ನೋಂದಣಿ ಮತ್ತು ಸುಲಭವಾಗಿ ಲಭ್ಯವಿರುವ ಡಿಜಿಟಲ್ ಪ್ರತಿಗಳನ್ನು ಖಚಿತಪಡಿಸಿಕೊಳ್ಳಿ. ರಸ್ತೆಗೆ ಇಳಿದ ಮೇಲೆ ಮೊದಲ ಹತ್ತು ಕಿಲೋಮೀಟರ್ ನಿಧಾನವಾಗಿ ಸಾಗಿ. ಕೇಳಿ, ಅನುಭವಿಸಿ, ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಿ. ಮೋಟಾರ್‌ಸೈಕಲ್ ನಿರಂತರವಾಗಿ ಸಂವಹನ ನಡೆಸುತ್ತದೆ, ಆದರೆ ಗಮನವಿಟ್ಟು ಆಲಿಸುವ ರೈಡರ್‌ಗಳಿಗೆ ಮಾತ್ರ ಅದು ತಿಳಿಯುತ್ತದೆ. ಲಾಂಗ್ ರೈಡ್‌ಗಳು ಸಿದ್ಧತೆಗೆ ಪ್ರತಿಫಲ ನೀಡುತ್ತವೆ, ಹುಂಬತನಕ್ಕಲ್ಲ; ವಿವರಗಳನ್ನು ಗೌರವಿಸುವವರಿಗೆ ಅಹಿತಕರ ಆಶ್ಚರ್ಯಗಳು ಅಪರೂಪಕ್ಕೆ ಎದುರಾಗುತ್ತವೆ.
